ಸಂಚಾರ ನಿಯಮ ಉಲ್ಲಂಘನೆ: ಶೇ. 50 ರಿಯಾಯಿತಿ ಕೊಡುಗೆ ವಿಸ್ತರಣೆ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಮತ್ತೊಮ್ಮೆ ಬಂಪರ್ ಆಫರ್ ಕೊಟ್ಟಿರುವ ಸರಕಾರವು ಮಾ. 4ರಿಂದ 15 ದಿನಗಳವರೆಗೆ ಶೇ.50 ರಿಯಾಯಿತಿ ನೀಡಿದೆ.
11-02-2023ರ ಒಳಗಾಗಿ ಅನ್ವಯವಾಗುವ ಪ್ರಕರಣಗಳಿಗೆ ಮಾತ್ರ ಒಂದು ಬಾರಿಯ ಕ್ರಮವಾಗಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರ ರಿಯಾಯಿತಿ ನೀಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಈ ಕೊಡುಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ 100 ಕೋಟಿಗೂ ಅಧಿಕ ದಂಡ ಸಂಗ್ರಹವಾದ ಹಿನ್ನೆಲೆಯಲ್ಲಿ ದಂಡ ಕಟ್ಟುವ ಕಾಲಾವಕಾಶವನ್ನು ವಿಸ್ತರಿಸಬೇಕು ಎಂಬ ಬೇಡಿಕೆ ಬಂದಿತ್ತು. ಇದೀಗ ಸರಕಾರವು ಮತ್ತೆ ಶೇ.50ರಷ್ಟು ರಿಯಾಯಿತಿ ಕೊಡುಗೆ ಕೊಟ್ಟಿದೆ.
ಎಲ್ಲೆಲ್ಲಿ ಪಾವತಿಸಬಹುದು?
ಕಳೆದ ಬಾರಿಯಂತೆಯೇ ಈ ಬಾರಿಯೂ ಕರ್ನಾಟಕ ಒನ್ ವೆಬ್ಸೈಟ್ನಲ್ಲಿ ವಿವರ ಪಡೆದು ದಂಡ ಪಾವತಿಗೆ ಅವಕಾಶವಿದೆ. ಪೇಟಿಎಂ ಆಯಪ್ ಮೂಲಕವೂ ನಿಯಮ ಉಲ್ಲಂಘನೆಯ ವಿವರ ಪಡೆದು ಪಾವತಿಸಬಹುದು.