ಶಾಸಕಿ ಕೆ.ಪೂರ್ಣಿಮಾಗೆ ಕಾಡುಗೊಲ್ಲರು ಮತ ನೀಡಬೇಡಿ-ಮಾಜಿ ಸಚಿವ ಡಿ.ಸುಧಾಕರ್ ಹೇಳಿಕೆ ವೈರಲ್

ಚಿತ್ರದುರ್ಗ, ಫೆಬ್ರವರಿ 13: 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಂದ ಆಶ್ವಾಸನೆ ಭರವಸೆಗಳ ಮಹಾಪೂರವೇ ಹರಿದು ಬರುತ್ತಿದ್ದರೆ, ಮತ್ತೊಂದೆಡೆ ಆರೋಪ, ಪ್ರತ್ಯಾರೋಪಗಳು ಕೂಡ ಕೇಳಿ ಬರುತ್ತಿವೆ. ಹಿರಿಯೂರು ಬಿಜೆಪಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಕಾಡುಗೊಲ್ಲರು ಮತ ನೀಡಬೇಡಿ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಮ್ಯಾಕ್ಲೂರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಚಿವ ಡಿ.ಸುಧಾಕರ್ ಅಲ್ಲಿನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು, ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಬುಡಕಟ್ಟು ಕಾಡುಗೊಲ್ಲ ಸಮುದಾಯದವರಲ್ಲ. ಅವರು ಊರುಗೊಲ್ಲರು ಮುಂದುವರಿದ ಸಮಾಜದವರು. ಶೋಶಿತರಲ್ಲ ಎಂದಿದ್ದಾರೆ.
ಕಾಡುಗೊಲ್ಲರು ನಿಜವಾದ ಶೋಷಿತರು. ನೀವು ಊರುಗೊಲ್ಲರಿಗೆ ಮತ ಹಾಕುವುದು ಒಂದೇ ಕ್ಲೋಸ್ ಆಗುವುದು ಒಂದೇ ಎಂದ ಡಿ.ಸುಧಾಕರ್ ಇಲ್ಲಿನ ಕಾಡುಗೊಲ್ಲರು ನಿಜವಾದ ಹಿಂದುಳಿದವರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರರಷ್ಟು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಡಿ ಸುಧಾಕರ್ ಭರವಸೆ ನೀಡಿದರು.
ಮ್ಯಾಕ್ಲೂರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಚಿವ ಡಿ.ಸುಧಾಕರ್ ಅವರನ್ನು ಸ್ಥಳೀಯ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ಸುಧಾಕರ್ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಹೆಗಲ ಮೇಲೆ ಹೊತ್ತು, ಜೈಕಾರ ಹಾಕಿದರು. ನಂತರ ಕರಿ ಕಂಬಳಿ ಹಾಕಿ ಸನ್ಮಾನಿಸಿ ಸ್ವಾಗತಿಸಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಆರ್. ನಾಗೇಂದ್ರ ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದಯಾನಂದ್, ಚಂದ್ರಹಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಾಸಕಿ ಕೆ.ಪೂರ್ಣಿಮಾಗೆ ಕಾಡುಗೊಲ್ಲರು ಮತ ನೀಡಬೇಡಿ ಎನ್ನುವ ಮಾಜಿ ಸಚಿವ ಡಿ.ಸುಧಾಕರ್ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಖಂಡಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವರು ಈ ರೀತಿ ಹೇಳಿಕೆ ನೀಡಿ ಜಾತಿ ಜಾತಿಗಳ ನಡುವೆ ಮಧ್ಯೆ ಬೆಂಕಿ ಹಚ್ಚುವ ಕೆಲಸ ಹಾಗೂ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.