ರೈತರಿಗೆ 24,000 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ನೀಡುವ ಗುರಿ - ಬಸವರಾಜ ಬೊಮ್ಮಾಯಿ

ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆಗಳಿಗೆ ಪೂರಕವಾಗಿ ಬಡ್ಡಿರಹಿತ ಸಾಲ ಸೌಲಭ್ಯ, ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರವನ್ನುದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಸಾಲ ಯೋಜನೆ ರೂಪಿಸುವಲ್ಲಿ ಸಹಕಾರ ಇಲಾಖೆ ಪ್ರಮುಖವಾಗಿದ್ದು, ರಾಜ್ಯದಲ್ಲಿ ಪ್ರಸಕ್ತ 24,000 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ನೀಡುವ ಗುರಿಯನ್ನು ನಮ್ಮ ಸರ್ಕಾರ ಹಾಕಿಕೊಂಡಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರ ಕೇವಲ 18 ಲಕ್ಷ ರೈತರಿಗೆ ಸಾಲ ನೀಡಿದೆ. ಆದರೆ, ನಮ್ಮ ಸರ್ಕಾರ 32 ಲಕ್ಷ ರೈತರಿಗೆ ಸಾಲ ನೀಡುವ ಮೂಲಕ ಪ್ರಾಮಾಣಿಕವಾಗಿ ರೈತಪರ ಬದ್ಧತೆ ತೋರಿಸಿದೆ ಎಂದರು.
ರೈತ ತಾನು ಬೆಳೆದ ಬೆಳೆಗೆ ತಾನೇ ದರವನ್ನು ನಿಗದಿಪಡಿಸುವಷ್ಟು ಸ್ವಾವಲಂಬಿಯಾಗಬೇಕು. ರೈತರು ಆರ್ಥಿಕವಾಗಿ ಸದೃಢರಾಗುವ ಮೂಲಕ ಅವರ ಬದುಕು ಹಸನಾಗಬೇಕು ಎಂಬುದು ನನ್ನ ಕನಸಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದ 32 ಲಕ್ಷ ರೈತರಿಗೆ ಈ ಸಾಲ ಯೋಜನೆ ಅನ್ವಯವಾಗಲಿದ್ದು, ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಾಲ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.