ರೇವಣ್ಣ ಪರ ಬಿಇಒ ಮತಯಾಚನೆ ಆರೋಪ

ರೇವಣ್ಣ ಪರ ಬಿಇಒ ಮತಯಾಚನೆ ಆರೋಪ

ಹೊಳೆನರಸೀಪುರ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಸರ್ಕಾರಿ ಅಧಿಕಾರಿಯೊಬ್ಬರು ಜೆಡಿಎಸ್‌ನ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪರವಾಗಿ ಮತ ಯಾಚಿಸಿದ ನಡೆಯನ್ನು ತಾಲೂಕು ಕಾಂಗ್ರೆಸ್‌ ಮುಖಂಡ ಶ್ರೇಯಸ್‌ ಪಟೇಲ್‌ ತೀವ್ರವಾಗಿ ಖಂಡಿಸಿದರು.

ಪಟ್ಟಣದ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಿಇಒ ಶಾಲಾ ಕಾರ್ಯಕ್ರಮದಲ್ಲಿ ಹಾಲಿ ಶಾಸಕನ ಪರ ಮತಯಾಚಿಸಿ, ಗ್ರಾಮದ ಜನತೆ ಅವರಿಗೆ ಹೆಚ್ಚಿನ ಬೆಂಬಲ ನೀಡುವಂತೆಮನವಿ ಮಾಡಿದ್ದಾರೆ. ಇದು ಕಾನೂನಿನ ಪ್ರಕಾರ ಅಕ್ಷಮ್ಯವೆಂದು ಟೀಕಿಸಿದರು.

ಆಯೋಗಕ್ಕೆ ಪತ್ರ: ಕಳೆದ ಎರಡು ತಿಂಗಳ ಹಿಂದೆ ತಾವು ಕೇಂದ್ರ ಚುನಾವಣಾ ಆಯೋಗ ಸೇರಿದಂತೆ ರಾಜ್ಯ, ಜಿಲ್ಲೆ, ತಾಲೂಕು ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಠಿಕಾಣಿ ಹಾಕಿರುವ ಅಧಿಕಾರಿಗಳು ಏಕ ಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಪಾರದರ್ಶಕ ಆಡಳಿತ ಮರೀಚಿಕೆಯಾಗಿದೆ. ಇಂತಹ ಅಧಿಕಾರಿಗಳಿಂದ ಕ್ಷೇತ್ರದಲ್ಲಿ ಮುಕ್ತ ಚುನಾವಣೆ ನಡೆಸಲು ಅಸಾಧ್ಯವಾಗಿದೆ. ಆದ್ದರಿಂದ ಇಂತಹ ಸರ್ಕಾರಿ ಆಧಿಕಾರಿಗಳನ್ನು ವರ್ಗಾವಣೆ ಮಾಡಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮತ್ತೂಮ್ಮೆ ಆಯೋಗಕ್ಕೆ ಪತ್ರ: ತಾವು ಕೇಂದ್ರ ಚುನಾವಣಾ ಬರೆದ ಪತ್ರಕ್ಕೆ ಈ ದಿನದವರಗೆ ಯಾವುದೆ ಲಿಖೀತ ಹಿಂಬರಹ ಬಂದಿಲ್ಲ, ಆದರೂ ಸಹ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ಮತ್ತೂಮ್ಮೆ ಪತ್ರ ಬರೆದು ಬಹಳ ವರ್ಷಗಳಿಂದ ಠಿಕಾಣಿ ಹೂಡಿರುವಅಧಿಕಾರಿಗಳನ್ನು ವಿಧಾನಸಭಾ ಚುನಾವಣೆ ಮುಗಿಯುವವರಗೆ ವರ್ಗಾವಣೆ ಮಾಡಬೇಕೆಂದು ಮತ್ತೂಮ್ಮೆ ತಾವು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳನ್ನು ಮನವಿ ಮಾಡುವುದಾಗಿ ತಿಳಿಸಿದರು.

ದುರಾಡಳಿತದ ವಿರುದ್ಧ ಸಮರ: ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ತಾಲೂಕಿನಲ್ಲಿ ಕಳೆದ 20 ವರ್ಷ ಗಳಿಂದ ಜನರ ಆಶೋತ್ತಗಳ ವಿರುದ್ಧ ದರ್ಪ ದುರಾಡಳಿತ ವಿರುದ್ಧ ಮತ್ತುಸ್ವಾಭಿಮಾನಗಳ ಪರವಾಗಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಯುದ್ಧ ಎಂದೆ ಹೇಳಬಹುದಾಗಿದೆ. ಈ ಚುನಾವಣೆಯಲ್ಲಿಸ್ವಾಭಿಮಾನಿಗಳಿಗೆ ದೊರೆಯವ ಜಯ ಆಗಲಿದೆ ಎಂದರು.

ರಸ್ತೆ ಕಾಮಗಾರಿಯಲ್ಲೂ ತಾರತಮ್ಯ: ತಾಲೂಕಿನ ಮಲ್ಲಪ್ಪನ ಹಳ್ಳಿ ರಸ್ತೆಗೆ ವಿದ್ಯುತ್‌ ನಗರದವರೆಗೆ ಕಾಂಕ್ರಿಟ್‌ ರಸ್ತೆ ಮಾಡುತ್ತಿದ್ದು, ಈ ರಸ್ತೆಬೀರನಹಳ್ಳಿ ಗ್ರಾಮ ದವರೆಗೆ ಸಂಪೂರ್ಣ ಗುಂಡಿಗಳಿಂದ ತುಂಬಿವಾಹನಗಳು ಓಡಾಡದಂತೆ ಪರಿಸ್ಥಿತಿ ಎದುರಾಗಿದೆ. ಆದರೆ, ಕಾಂಕ್ರಿಟ್‌ ರಸ್ತೆಯನ್ನು ಕೇವಲ ವಿದ್ಯುತ್‌ ನಗರದವರೆಗೆ ನಡೆಸುತ್ತಿದ್ದು ಇದು ಸರಿಯಲ್ಲ. ಈ ರಸ್ತೆಯನ್ನು ಬೀರನಹಳ್ಳಿ ವರೆಗೆ ಮುಂದುವರೆಸಬೇಕೆಂದು ನೀರಾವರಿ ಇಲಾಖೆ ಆಧಿಕಾರಿಗಳಿಗೆಮನವಿ ಮಾಡುವುದಾಗಿ ತಿಳಿಸಿದರು. ಈ ರಸ್ತೆ ನಿರ್ಮಾಣದಲ್ಲಿ ತಾರತಮ್ಯ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ತಾವು ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಜಾಲತಾಣದ ರಾಜ್ಯಉಪಾಧ್ಯಕ್ಷ ಮುಜಾಹಿದ್‌ ಪಾಷಾ, ಪಕ್ಷದ ಮುಖಂಡರಾದ ಹೇಮಂತ್‌ ಕುಮಾರ್‌, ಎಚ್‌.ಟಿ.ಲಕ್ಷ್ಮಣ್‌, ಗೊವಿಂದರಾಜು ಹಾಜರಿದ್ದರು.

ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ :

ಪ್ರಸ್ತುತ ತಾಲೂಕಿನಲ್ಲಿ ಇರುವ ಬಹುತೇಕ ಅಧಿಕಾರಿಗಳು ಮಾಜಿ ಸಚಿವ ಹಾಗು ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಶಾಲಾ ಕಾರ್ಯಕ್ರಮದಲ್ಲಿ ಜೆಡಿಎಸ್‌ ಪಕ್ಷದ ಪರವಾಗಿ ಮತ ಯಾಚಿಸಿ ರುವ ವಿಡಿಯೋ ಬಿಡುಗಡೆ ಮಾಡಿ ಬಿಇಒ ಭಾಗ್ಯಮ್ಮ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಜತೆಗೆ ವಿಡಿಯೋ ತುಣುಕನ್ನು ಜಿಲ್ಲಾಧಿಕಾರಿಗಳು, ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿ ಕ್ರಮ ಕೈಗೊಳ್ಳುವಂತೆ ತಾಲೂಕು ಕಾಂಗ್ರೆಸ್‌ ಮುಖಂಡ ಶ್ರೇಯಸ್‌ ಪಟೇಲ್‌ ಆಗ್ರಹಿಸಿದರು.