ಮತಾಂತರ ಕಾರ್ಯಕ್ರಮದಲ್ಲಿ ಭಾಗಿ: ಎಎಪಿ ಮಾಜಿ ಸಚಿವ ರಾಜೇಂದ್ರ ವಿಚಾರಣೆ

ಮತಾಂತರ ಕಾರ್ಯಕ್ರಮದಲ್ಲಿ ಭಾಗಿ: ಎಎಪಿ ಮಾಜಿ ಸಚಿವ ರಾಜೇಂದ್ರ ವಿಚಾರಣೆ

ವದೆಹಲಿ: 'ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಆಮ್‌ ಆದ್ಮಿ ಪಕ್ಷದ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್‌ ಅವರನ್ನು ಇಲ್ಲಿನ ಪಹರ್‌ಗಂಜ್‌ ಠಾಣೆ ಪೊಲೀಸರು ಮಂಗಳವಾರ ವಿಚಾರಣೆಗೆ ಒಳಪಡಿಸಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ 5ರಂದು ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ರಾಜೇಂದ್ರ ಅವರು ಪಾಲ್ಗೊಂಡಿದ್ದರು. ಅಲ್ಲಿ ಹಿಂದೂ ದೇವತೆಗಳಿಗೆ ಅಗೌರವ ಸೂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ರಾಜೇಂದ್ರ ಅವರ ವಿರುದ್ಧ ಲಿಖಿತ ದೂರು ದಾಖಲಾಗಿತ್ತು.

'ಪೊಲೀಸರು ನೋಟಿಸ್‌ ನೀಡಿದ್ದರಿಂದ ವಿಚಾರಣೆಗೆ ಹಾಜರಾಗಿದ್ದೇನೆ. ನಾನು ಬಾಬಾಸಾಹೇಬ್‌ ಅಂಬೇಡ್ಕರ್‌ ಹಾಗೂ ಭಾರತ ಸಂವಿಧಾನದ ಅನುಯಾಯಿ. ತಪ್ಪು ಮಾಡಿದ್ದರೆ ಪೊಲೀಸರು ನನ್ನನ್ನು ಬಂಧಿಸಲಿ' ಎಂದು ರಾಜೇಂದ್ರ ಪ್ರತಿಕ್ರಿಯಿಸಿದ್ದಾರೆ.

ರಾಜೇಂದ್ರ ಅವರು ಭಾನುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಪಕ್ಷಕ್ಕೆ ಮುಜುಗರ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿದ್ದರು.