ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್
ಕೊಪ್ಪಳ : ಕೊಪ್ಪಳ ಜಿಲ್ಲೆಯ ಆದ್ಯತಾ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಫೆಬ್ರವರಿ-2023ರ ಮಾಹೆಗೆ ಆಹಾರ ಧಾನ್ಯಗಳ ಹಂಚಿಕೆ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಜಿಲ್ಲೆಯ ಆದ್ಯತಾ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆಜಿ ಪಡಿತರ ಧಾನ್ಯಗಳ ಹಂಚಿಕೆಯ ಜೊತೆಗೆ ಜನವರಿ-2023ರ ಮಾಹೆಯಿಂದ ಅನ್ವಯವಾಗುವಂತೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿ ಹಂಚಿಕೆ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರಿಂದ ಆದೇಶವಾಗಿರುತ್ತದೆ. ಆದರೆ, ನಿಗದಿತ ಅವಧಿಯಲ್ಲಿ ಸಗಟು ಮಳಿಗೆಗೆ ಎತ್ತುವಳಿಯಾಗದ ಕಾರಣ ಫೆಬ್ರವರಿ-2023ರ ಮಾಹೆಯಲ್ಲಿ ಜನವರಿ-2023 ಮಾಹೆಯ 1 ಕೆಜಿ ಅಕ್ಕಿ ಹಾಗೂ ಫೆಬ್ರವರಿ-2023ರ ಮಾಹೆಯ 1 ಕೆಜಿ ಅಕ್ಕಿ ಸೇರಿ ಒಟ್ಟು 2ಕೆಜಿ ಅಕ್ಕಿಯೊಂದಿಗೆ ಎನ್.ಎಫ್.ಎಸ್.ಎ 5 ಕೆಜಿ ಅಕ್ಕಿಯನ್ನು ಸೇರಿಸಿ ಒಟ್ಟು 07 ಕೆ.ಜಿ ಅಕ್ಕಿಯನ್ನು ಫೆಬ್ರವರಿ-2023ರ ಮಾಹೆಯಲ್ಲಿ ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರಿಗೆ ಹಂಚಿಕೆ ನೀಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆಜಿ ಅಕ್ಕಿ ಇದ್ದು ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಆಹಾರಧಾನ್ಯಗಳ ಹಂಚಿಕೆ ಪ್ರಮಾಣ : ಫೆಬ್ರವರಿ-2023ರ ಮಾಹೆಗೆ ಜಿಲ್ಲೆಯ ಪಡಿತರ ಚೀಟಿದಾರರಿಗೆ ಪಡಿತರ ಧಾನ್ಯಗಳ ಹಂಚಿಕೆ ಪ್ರಮಾಣದ ವಿವರ ಇಂತಿದೆ. ಆದ್ಯತಾ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಉಚಿತವಾಗಿ 7 ಕೆಜಿ ಅಕ್ಕಿ (5 ಕೆಜಿ+ 1 ಕೆಜಿ+1 ಕೆಜಿ), ಅಂತ್ಯೋದಯ (ಎಎವೈ) ಪ್ರತಿ ಚೀಟಿಗೆ ಉಚಿತ 35 ಕೆಜಿ ಅಕ್ಕಿ, ಆದ್ಯತೇತರ (ಎಪಿಎಲ್) ಚೀಟಿದಾರರಿಗೆ ಪ್ರತಿ ಕೆಜಿಗೆ 15 ರೂ.ನಂತೆ 10 ಕೆಜಿ ಅಕ್ಕಿಯನ್ನು ಹಂಚಿಕೆ ಮಾಡಲಾಗಿದೆ ಪ್ರಕಟಣೆ ತಿಳಿಸಿದೆ.