ಪರಿಷತ್ ಚುನಾವಣೆ ಮೈತ್ರಿ, ನಾಳೆ ಜೆಡಿಎಸ್ ನಿರ್ಧಾರ ಪ್ರಕಟ

ಪರಿಷತ್ ಚುನಾವಣೆ ಮೈತ್ರಿ, ನಾಳೆ ಜೆಡಿಎಸ್ ನಿರ್ಧಾರ ಪ್ರಕಟ

ಬೆಂಗಳೂರು, ಡಿ.6- ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತೊಂದು ರಾಜಕೀಯ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾಳೆ ಜೆಡಿಎಸ್ ನಿರ್ಧಾರ ಪ್ರಕಟವಾಗಲಿದೆ.

ಮೇಲ್ಮನೆ ಚುನಾವಣಾ ಪೂರ್ವ ಮೈತ್ರಿ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಳೆ ಪಕ್ಷದ ಕಚೇರಿಯಲ್ಲಿ ನಿರ್ಧಾರ ಪ್ರಕಟಿಸಲಿದ್ದಾರೆ. ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಈಗಾಗಲೇ ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ.

ಮೇಲ್ಮನೆಯ 25 ಸ್ಥಾನಗಳಿಗೆ ಡಿ.10ರಂದು ಮತದಾನ ನಡೆಯಲಿದ್ದು, ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಏಕಾಂಗಿ ಹೋರಾಟ ನಡೆಸಬೇಕೆ ಎಂಬ ಬಗ್ಗೆ ಪಕ್ಷದ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಈಗಾಗಲೇ ಕೇಳಿ ಬರುತ್ತಿವೆ. ಕಾಂಗ್ರೆಸ್ ಕೂಡ ಇದೇ ರೀತಿಯಲ್ಲಿ ಆರೋಪಿಸುತ್ತಿದೆ. ಅಲ್ಲದೆ, ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಈ ತನಕ ಆಸಕ್ತಿ ತೋರಿಲ್ಲ.

ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜೆಡಿಎಸ್ ಜತೆ ಬಹಿರಂಗ ಮೈತ್ರಿಗೆ ಒಲವು ತೋರಿದ್ದಾರೆ. ಪೂರಕವಾಗಿ ಬಿಜೆಪಿಯ ಇತರೆ ನಾಯಕರು ಕೂಡ ಪ್ರತಿಕ್ರಿಯಿಸಿದ್ದಾರೆ. ಆದರೂ ಈತನಕ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಅಧಿಕೃತ ತೀರ್ಮಾನವನ್ನು ಪ್ರಕಟಿಸದೆ ಗೌಪ್ಯತೆ ಕಾಪಾಡಿಕೊಂಡು ಬರುತ್ತಿದೆ.

ಹಾಸನ, ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರದಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರಗಳಲ್ಲಿ ಶತಾಯ-ಗತಾಯ ಪ್ರಯತ್ನಿಸಿ ತನ್ನ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ಹರಸಾಹಸ ಮಾಡುತ್ತಿದೆ. ಮೈತ್ರಿ ಮಾಡಿಕೊಂಡರೆ ಈ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲ ಕೋರಿ ಉಳಿದ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಸಾಧ್ಯತೆ ಇದೆ.

ಆದರೆ, ಜೆಡಿಎಸ್ ಸ್ರ್ಪಧಿಸಿರುವ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ಯಾವ ರೀತಿ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಮುಂಬರುವ 2023ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೆ, ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಗೌಡರು ಮಾತ್ರ ಕಾಂಗ್ರೆಸ್, ಬಿಜೆಪಿಯೊಂದಿಗೆ ಹೊಂದಾಣಿಕೆ ಬಗ್ಗೆ ಆಸಕ್ತಿ ತೋರಿಲ್ಲ. ಆರು ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ಪ್ರಯತ್ನಿಸುತ್ತಿರುವ ಜೆಡಿಎಸ್ ಯಾವ ನಿರ್ಧಾರ ಕೈಗೊಳ್ಳಲಿದೆ ಹಾಗೂ ಕುಮಾರಸ್ವಾಮಿ ಯಾವ ನಿಲುವು ಪ್ರಕಟಿಸಲಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.