ಗುಜರಾತ್‍ನ ಮೊರ್ಬಿ ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆ

ಗುಜರಾತ್‍ನ ಮೊರ್ಬಿ ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆ

ಅಹಮಾದಾಬಾದ್,ಅ.31- ಗುಜರಾತ್‍ನ ಮೊರ್ಬಿಯ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಈವರೆಗೂ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದ್ದು, ಈವರೆಗೂ 177ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ರಾಜ್‍ಕೋಟ್‍ನ ಬಿಜೆಪಿ ಸಂಸದ ಮೋಹನ್ಭಾಯ್ ಕಲ್ಯಾಣಿ ಕುಂದರಿಯಾ ಅವರ ಕುಟುಂಬದ 12 ಸದಸ್ಯರು ನಿನ್ನೆ ಸಂಜೆ ಗುಜರಾತ್‍ನ ಮೊರ್ಬಿ ಸೇತುವೆ ಕುಸಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 60 ಕ್ಕೂ ಹೆಚ್ಚು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಹೆಚ್ಚು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ.

ಎನ್‍ಡಿಆರ್‍ಎಫ್, ಸೇನೆ ಮತ್ತು ಸ್ಥಳೀಯ ಆಡಳಿತದ ಐದು ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ದೋಣಿ, ಬೋಟ್‍ಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.

140ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಈ ತೂಗು ಸೇತುವೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಕೇಬಲ್‍ಗಳ ಸಹಾಯದಿಂದ ಬ್ರಿಟಿಷರು ನಿರ್ಮಿಸಿರುವ ಅತಿ ಉದ್ದದ ತೂಗು ಸೇತುವೆ ಇದಾಗಿದೆ. ನಿನ್ನೆ ರಜೆ ದಿನದ ಹಿನ್ನೆಲೆ ಈ ಪ್ರದೇಶದಲ್ಲಿ ಜನ ದಟ್ಟನೆ ಇತ್ತು. ನೂರು ಜನರ ಸಾಮಥ್ರ್ಯಯುಳ್ಳ ಸೇತುವೆ ಮೇಲೆ ಐದು ನೂರಕ್ಕೂ ಅಧಿಕ ಮಂದಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೇಬಲ್ ಕಟಾಗಿ ಧರೆಗೆ ಉರುಳಿದೆ.

ದುರಂತ ಸಂಭವಿಸುತ್ತಿದ್ದಂತೆಯೇ ಕೂಡಲೇ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇದಲ್ಲದೇ ಬೇರೆ ಕಡೆಯಿಂದಲೂ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.

ವಿವಿಧ ಆರೋಗ್ಯ ಕೇಂದ್ರಗಳು, ರಾಜ್‍ಕೋಟ್ ಪಿಡಿಯು ಆಸ್ಪತ್ರೆ ಮತ್ತು ಸುರೇಂದ್ರನಗರ ಸಿವಿಲ್ ಆಸ್ಪತ್ರೆಯ ಸುಮಾರು 40 ವೈದ್ಯರು ಗಾಯಾಳುಗಳಿಗೆ ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆತರಲು ರಾಜ್‍ಕೋಟ್, ಜಾಮ್‍ನಗರ, ಜುನಾಗಢ್ ಮೆಟ್ರೋಪಾಲಿಟನ್ ಪುರಸಭೆ ಮತ್ತು ಮೊರ್ಬಿ ಪುರಸಭೆಯಿಂದ ತುರ್ತು ಆಂಬುಲೆನ್ಸ್‍ಗಳು ಸ್ಥಳಕ್ಕೆ ಆಗಮಿಸಿ ರಾತ್ರಿಯಿಡೀ ಸಂಚಾರ ನಡೆಸಿವೆ. ಹಲವಾರು ಖಾಸಗಿ ಆಂಬ್ಯುಲೆನ್ಸ್‍ಗಳು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿವೆ.

ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಐಜಿಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ ನೌಕಾಪಡೆ, ಎನ್‍ಡಿಆರ್‍ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ವಾಯುಪಡೆ ಮತ್ತು ಭೂಸೇನೆಯವರು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಗುಜರಾತ್ ರಾಜ್ಯದ ಗೃಹ ಸಚಿವ ಹರ್ಷ್ ಸಂಘ್ವಿ ತಿಳಿಸಿದ್ದಾರೆ.ಸೇತುವೆ ಕುಸಿತದಲ್ಲಿ ಎಫ್‍ಐಆರ್ ಅನ್ನು ಸೆಕ್ಷನ್ 304 (ಕೊಲೆಗೆ ಸಮನಾಗಿರುವುದಿಲ್ಲ), 308 (ಸಾವಿಗೆ ಕಾರಣವಾಗುವ ಉದ್ದೇಶಪೂರ್ವಕ ಕೃತ್ಯ) ಮತ್ತು 114 (ಅಪರಾಧ ನಡೆದಾಗ ಕುಮ್ಮಕ್ಕು ನೀಡುವವರು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ, ಯಾರೇ ಜವಾಬ್ದಾರರಾಗಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೃತರಿಗೆ ಸಂತಾಪ ಸೂಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಐವತ್ತು ಸಾವಿರ ಪರಿಹಾರ ಘೋಷಿಸಿದ್ದಾರೆ.

ಶಿಥಿಲಗೊಂಡಿದ್ದ ಹಿನ್ನೆಲೆ 2 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿತ್ತು. ನವೀಕರಣಗೊಂಡ ಸೇತುವೆಯನ್ನು ಐದು ದಿನಗಳ ಹಿಂದೆ ಉದ್ಘಾಟಿಸಲಾಗಿತ್ತು. ಮೂರು ದಿನದ ಹಿಂದೆ ಜನರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು.

ಈಗ ಏಕಾಏಕಿ ಕುಸಿದಿರುವುದು ಅಕ್ರಮ ಕಾಮಗಾರಿ ನಡೆಸಲಾಗಿದೆ ಎಂಬ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಲು ಪ್ರಕರಣವನ್ನು ಎಸ್‍ಐಟಿಗೆ ವಹಿಸಲಾಗಿದೆ.