ನಾಲ್ಕು ದಿನಗಳ ಅವಧಿಯಲ್ಲಿ ತನ್ನ ಕಿರಿಯ ಸಹೋದರ ಮತ್ತು ತಾಯಿಯನ್ನು ಕಳೆದುಕೊಂಡ 12 ವರ್ಷದ ಅಮೃತಾ ದಿಕ್ಕು ತೋಚದೆ ತಾಯಿಯ ಅಂತ್ಯಕ್ರಿಯೆಯಲ್ಲಿ ನಿಂತಿದ್ದಳು. ಗದಗ: ನಾಲ್ಕು ದಿನಗಳ ಅವಧಿಯಲ್ಲಿ ತನ್ನ ಕಿರಿಯ ಸಹೋದರ ಮತ್ತು ತಾಯಿಯನ್ನು ಕಳೆದುಕೊಂಡ 12 ವರ್ಷದ ಅಮೃತಾ ದಿಕ್ಕು ತೋಚದೆ ತಾಯಿಯ ಅಂತ್ಯಕ್ರಿಯೆಯಲ್ಲಿ ನಿಂತಿದ್ದಳು.
ಅಮೃತಾ ಸಹೋದರ ಭರತ್ ನನ್ನು ಡಿಸೆಂಬರ್ 19 ರಂದು ಆತನ ಶಾಲಾ ಶಿಕ್ಷಕ ಅಮಾನುಷವಾಗಿ ಥಳಿಸಿ ಸರ್ಕಾರಿ ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಎಸೆದಿದ್ದರಿಂದ ಸಾವನ್ನಪ್ಪಿದ್ದ. ಅದೇ ಶಾಲೆಯ ಶಿಕ್ಷಕಿ ಗೀತಾ ಬಾರ್ಕರ್ (36) ತನ್ನ ಮಗನ ರಕ್ಷಣೆಗೆ ಮುಂದಾದಾಗ ಆರೋಪಿ ಆಕೆಗೂ ಸಲಾಕೆಯಿಂದ ಹೊಡೆದಿದ್ದ. ಗೀತಾ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಗುರುವಾರ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಆಸ್ಪತ್ರೆಯ ಅಧಿಕಾರಿಗಳು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.ಹದ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಗಲ್ಲಿಗೇರಿಸುವುದಾಗಿ ಭರವಸೆ ನೀಡುವವರೆಗೂ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಆದರೆ, ಪೊಲೀಸರು ಕುಟುಂಬದವರಿಗೆ ವಿಧಿವಿಧಾನಗಳನ್ನು ಪೂರೈಸುವಂತೆ ಮನವೊಲಿಸಿದರು. ಅಮೃತಾ ಅಜ್ಜಿ ಲಕ್ಷ್ಮವ್ವ ಬಾಲಕಿಯನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದರು. ಸೋಮವಾರದಿಂದ ಇಬ್ಬರು ಮನೋವೈದ್ಯರನ್ನು ನೇಮಿಸುವಂತೆ ಪಿಡಬ್ಲ್ಯುಡಿ ಸಚಿವ ಸಿ.ಸಿ.ಪಾಟೀಲ್ ಪ್ರಾಂಶುಪಾಲರಿಗೆ ಸೂಚನೆ ನೀಡಿದರು. ದುರಂತ ಸಂಭವಿಸಿದ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೆ ಆಘಾತವನ್ನು ನಿಭಾಯಿಸಲು ಸಹಾಯ ಮಾಡಲು ಕೌನ್ಸೆಲಿಂಗ್ ನೀಡಲಾಗುವುದು ಎಂದು ಹೇಳಿದ್ದಾರೆ.