ಕ್ರಿಸ್ಟಿಯಾನೋ ರೊನಾಲ್ಡೊ ಒಂದೇ ಒಂದು ಸೂಚನೆಗೆ 'ಕೋಲಾ'ಹಲ!
ಅಂತಾರಾಷ್ಟ್ರೀಯ: ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು, ಬೆಂಬಲಿಗರು ಇದ್ದಾರೆ. ಅವರ ಒಂದು ಮಾತಿಗೆ ಅಭಿಮಾನಿಗಳು ಸದಾ ಬೆಂಬಲ ನೀಡುತ್ತಾರೆ.
ಸದ್ಯ ಯುರೋ ಕಫ್ 2020 ಫುಟ್ಬಾಲ್ ಪಂದ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು, ನಿನ್ನೆ ಸುದ್ದಿಗೋಷ್ಟಿಯಲ್ಲಿ ನೀಡಿದ ಒಂದೇ ಒಂದು ಸೂಚನೆ 'ಕೋಲಾ'ಹಲವನ್ನೇ ಎಬ್ಬಿಸಿದೆ.
ಆಗಿದ್ದೇನು?
ಹಂಗೇರಿ-ಪೋರ್ಚುಗಲ್ (ಇ ಗುಂಪು) ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಲು ಬಂದ ರೊನಾಲ್ಡೊ, ಟೇಬಲ್ ಮೇಲೆ ಎರಡು ಕೊಕಾ ಕೋಲಾ ಬಾಟಲ್ಗಳನ್ನು ಗಮನಿಸಿದರು. ನಂತರ ಅವುಗಳನ್ನು ದೂರ ಸರಿಸಿ, ಅಲ್ಲಿಯೇ ಇದ್ದ ನೀರಿನ ಬಾಟಲ್ ಎತ್ತಿಕೊಂಡು 'ನೀರು ಕುಡಿಯಿರಿ, ಆರೋಗ್ಯವಾಗಿರಿ' ಎಂದು ಸೂಚನೆ ಕೊಟ್ಟರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 'ಕಾರ್ಬೋನೆಟೆಡ್ ಸಮ್ಮಿಶ್ರಣದ ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ' ಎಂದು ರೊನಾಲ್ಡೊ ಸೂಚ್ಯವಾಗಿ ಹೇಳಿದ್ದಾರೆ.