ಈಜಿಪುರ ಮೇಲ್ಸೇತುವೆ ಬಾಕಿ ಕೆಲಸ 2023ರ ಮಾರ್ಚ್‌ಗೆ ಮುಗಿಸಲು ರೂ.144 ಕೋಟಿ ಟೆಂಡರ್ ಆಹ್ವಾನ

ಬೆಂಗಳೂರು, ಜನವರಿ 09: ಅತೀ ವಿಳಂಬ ಕಾಮಗಾರಿಯಲ್ಲಿ ಪಟ್ಟಿಯಲ್ಲಿ ಕುಖ್ಯಾತಿ ಪಡೆದ ಕೋರಮಂಗಲದ ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೂ. 144 ಕೋಟಿ ಮೌಲ್ಯದ ಟೆಂಡರ್ ಕರೆದಿದೆ.
ರಾಜ್ಯ ಸರ್ಕಾರ ಮಾರ್ಚ್ 2022 ರಲ್ಲಿ ಕರ್ನಾಟಕ ಹೈಕೋರ್ಟ್‌ನ ನಿರ್ದೇಶನದಂತೆ ಕೋರಮಂಗಲದ ಈಜಿಪುರ ಮುಖ್ಯ ರಸ್ತೆ ಮತ್ತು ಕೇಂದ್ರೀಯ ಸದನ್ ನಡುವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ನೀಡಲಾಗಿದ್ದ ಟೆಂಡರ್ ರದ್ದುಗೊಳಿಸಿತ್ತು.
ಯೋಜನಾ ಸಲಹೆಗಾರರು ಮತ್ತು ಕಂಪನಿಯ ಎಂಜಿನಿಯರ್‌ಗಳು ಜಂಟಿ ಈವರೆಗೆ ನಡೆದ ಕಾಮಗಾರಿಯ ಅಳತೆ ಮತ್ತು ಮೌಲ್ಯಮಾಪನ ಮಾಡಲಾಗಿದೆ. ನಂತರವೇ ಹೊಸ ಟೆಂಡರ್ ಆಹ್ವಾನಿಸಲಾಗಿದೆ. ಬಾಕಿ ಉಳಿದ ಕಾಮಗಾರಿಯನ್ನು ಟೆಂಡರ್‌ನಲ್ಲಿ ಪಾಲ್ಗೊಳ್ಳಲಿರುವ ಹೊಸ ಕಂಪನಿ ಮಾರ್ಚ್ 2023 ರ ವೇಳೆಗೆ ಫ್ಲೈಓವರ್ ಸಿದ್ಧಗೊಳಿಸಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ರೂ. 204 ಕೋಟಿ ಒಟ್ಟು ಯೋಜನಾ ವೆಚ್ಚದೊಳಗೆ ಹೊಸ ಟೆಂಡರ್ ಆಹ್ವಾನಿಸುವಂತೆ ನಗರಾಭೀವೃದ್ಧಿ ಇಲಾಖೆ (ಯುಡಿಡಿ)ಯು ಬಿಬಿಎಂಪಿ ಗೆ ನಿರ್ದೇಶನ ನೀಡಿದೆ. 2022 ರಲ್ಲಿ ಸರ್ಕಾರ ಸಿಂಪ್ಲೆಕ್ಸ್ ಕಂಪನಿಗೆ ನೀಡಿದ್ದ ಟೆಂಡರ್ ರದೆದು ಮಾಡುವಾಗ ಇಲಾಖೆಯು ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆಯ ಮಾನದಂಡಗಳ ಪ್ರಕಾರ ಟೆಂಡರ್ ಕರೆಯುವಂತೆ ತಿಳಿಸಿತ್ತು.
ಕಾಮಗಾರಿ ಅವಶೇಷಗಳಿಂದ ಸಂಚಾರಕ್ಕೆ ಸಂಚಕಾರ
ಈಜಿಪುರ ಈ 2.5 ಕಿ.ಮೀ. ಉದ್ದದ ಮೇಲ್ಸೇತುವೆಯ ನಿರ್ಮಾಣವನ್ನು 2017ರ ಮೇನಲ್ಲಿ ಆರಂಭಿಸಲಾಗಿದ್ದು, 2019 ರ ನವೆಂಬರ್ ನಲ್ಲಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ವಿಳಂಬ ಕಾಮಗಾರಿ ಹಿನ್ನೆಲೆಯಲ್ಲಿ ದಂಡವನ್ನು ವಿಧಿಸಿದ್ದ ಬಿಬಿಎಂಪಿ ಡಿಸೆಂಬರ್ 2020 ರವರೆಗೆ ಗಡುವು ವಿಸ್ತರಿಸಿತು. ಇಷ್ಟಾದರೂ ಗಡುವಿನೊಳಗೆ ಯೋಜನೆ ಪೂರ್ಣಗೊಳ್ಳಲಿಲ್ಲ.
ಬಿಬಿಎಂಪಿ ಹಲವು ಎಚ್ಚರಿಕೆಗಳ ಹೊರತಾಗಿಯೂ ಗಡುವ ಮೀರಿದ್ದ ಗುತ್ತಿಗೆದಾರಿಗೆ ಬಿಬಿಎಂಪಿ ನೋಟಿಸ್ ಸಹ ನೀಡಿತ್ತು. ಇದಾದ ಬಳಿಕ ಒಂದು ವರ್ಷಕ್ಕೂ ಹೆಚ್ಚು ಕಾಲ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದರಿಂದ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸ್ಥಳೀಯ ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಅಪೂರ್ಣ ಕಾಮಗಾರಿಯಿಂದ ಈ ಭಾಗದ ಜನರು, ವಾಹನ ಸವಾರರು ಹೈರಾಣಾಗಿದ್ದಾರೆ.
ಸುಗಮ ಸಂಚಾರಕ್ಕೆ ವ್ಯವಸ್ಥೆಗೆ ಮನವಿ
ಆಗಸ್ಟ್ 2022 ರಂದೇ ಬಿಬಿಎಂಪಿ ಕರೆದಿದ್ದ ಹೊಸ ಟೆಂಡರ್‌ನಲ್ಲಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದರು. ಆದರೆ ಕಾರಣಾಂತರಗಳಿಂದ ಟೆಂಡರ್ ನೀಡಲು ಸಾಧ್ಯವಾಗಲಿಲ್ಲ. ಸದ್ಯ ಮತ್ತೆ ಟೆಂಡರ್ ಕರೆಯಲಾಗಿದೆ. ಈ ಮೇಲ್ಸೇತುವೆ ಅಪೂರ್ಣ ಯೋಜನೆಯಿಂದ ವರ್ಷದಿಂದಲೂ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.
ನಿರ್ಮಾಣ ಕಾಮಗಾರಿ ಅವಶೇಷಗಳನ್ನು ಫ್ಲೈಓವರ್ ಕೆಳಗೆ ಸುರಿಯಲಾಗಿದೆ. ಸಂಚಾರ ಸಮಸ್ಯೆ, ಧೂಳು ಹೆಚ್ಚಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಲೋಹದ ಬ್ಯಾರಿಕೇಡ್ ಮತ್ತು ಅವಶೇಷಗಳು ಅಪಘಾತ ಹೆಚ್ಚಳಕ್ಕೆ ಕಾರಣವಾಗು ಸಾಧ್ಯತೆ ಇದೆ. ಈ ಕುರಿತು ಮನವಿ ಮಾಡಿದರೂ ಬಿಬಿಎಂಪಿ ತಲೆಕೆಡಸಿಕೊಂಡಿಲ್ಲ. ಮೇಲ್ಸೇತುವೆ ಕೆಳಗಿನ ಅವಶೇಷ, ತ್ಯಾಜ್ಯ ತೆಗೆಯದ ಕಾರಣ ರಾತ್ರಿ ವೇಳೆ ದೊಡ್ಡ ಕಲ್ಲುಗಳು ಸಿಮೆಂಟ್ ಸಾಮಗ್ರಿಗಳು ಕಾಣದೇ ವಾಹನ ಸವಾರರು ಅಪಾಯಕ್ಕೆ ಸಿಲುಕುವಂತಾಗಿದೆ ಎಂದು ಸವಾರರು ಅಳಲು ತೋಡಿಕೊಂಡಿದ್ದಾರೆ