ಆಸ್ಟ್ರೇಲಿಯಾ ತಂಡಕ್ಕೆ ಆಘಾತ: 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಡೇವಿಡ್ ವಾರ್ನರ್

ದೆಹಲಿ ಟೆಸ್ಟ್‌ನ ಎರಡನೇ ದಿನದ ಆಟದ ಆರಂಭಕ್ಕೆ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯಾಗಿದೆ. ಪ್ರಮುಖ ಬ್ಯಾಟರ್ ಡೇವಿಡ್ ವಾರ್ನರ್ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು, ಕನ್‌ಕ್ಯುಶನ್ ಬದಲೀ ಆಟಗಾರನಾಗಿ ಮ್ಯಾಟ್ ರೆನ್‌ಶಾ ಆಡಲಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದ್ದ ಡೇವಿಡ್ ವಾರ್ನರ್, ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲೂ ಕಳಪೆ ಫಾರ್ಮ್ ಮುಂದುವರೆಸಿದ್ದರು.
ಬ್ಯಾಟಿಂಗ್ ಮಾಡುವ ವೇಳೆ ಅವರು ಮೊಹಮ್ಮದ್ ಸಿರಾಜ್ ಬೌನ್ಸರ್ ಎಸೆತದಲ್ಲಿ ಹೊಡೆತ ತಿಂದಿದ್ದರು. ಚೆಂಡು ತಲೆಗೆ ಬಡಿದ ಪರಿಣಾಮ ಅವರು ಫಿಟ್ ಆಗಿ ಕಾಣಲಿಲ್ಲ, ನಂತರ ಅವರು ಹೆಚ್ಚಿನ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅವರ ದೇಹಕ್ಕು ಹಲವು ಬಾರಿ ಚೆಂಡು ತಾಗಿತ್ತು. ಅದರಲ್ಲೂ ತೋಳಿಗೆ ಚೆಂಡು ಬಿದ್ದ ನಂತರ ಸಾಕಷ್ಟು ನೋವಿನಿಂದ ನರಳಿದ್ದರು, ತಕ್ಷಣವೇ ಅವರಿಗೆ ವೈದ್ಯಕೀಯ ಆರೈಕೆ ಮಾಡಲಾಗಿತ್ತು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆದ ಬಳಿಕ, ಭಾರತದ ಬ್ಯಾಟಿಂಗ್ ವೇಳೆ ವಾರ್ನರ್ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಬರಲಿಲ್ಲ. ಫಾಕ್ಸ್ ಕ್ರಿಕೆಟ್ ವರದಿ ಮಾಡಿರುವಂತೆ ಚೆಂಡು ತಲೆಗೆ ಬಡಿದ ಅಂತರ ವಾರ್ನರ್ 'ಅಸ್ವಸ್ಥರಾಗಿದ್ದರು' ಎಂದು ಹೇಳಲಾಗಿದೆ.
ವಾರ್ನರ್ ಬದಲಿಗೆ ಕಣಕ್ಕಿಳಿಯಲಿರುವ ರೆನ್‌ಶಾ
ಮೊದಲನೇ ದಿನದಾಟದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಉಸ್ಮಾನ್ ಖವಾಜ ವಾರ್ನರ್ ಆರೋಗ್ಯ ಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದರು. ವಾರ್ನರ್ ಸಾಕಷ್ಟು ದಣಿದಿದ್ದಾರೆ ಎಂದು ಹೇಳಿದ್ದರು. ಪಂದ್ಯದ ಎರಡನೇ ದಿನದಾಟಕ್ಕೆ ಮುನ್ನ ವೈದ್ಯಕೀಯ ಸಿಬ್ಬಂದಿ ಅವರು ಆಡುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಡೇವಿಡ್ ವಾರ್ನರ್ ಬದಲಿಗೆ ಮ್ಯಾಟ್ ರೆನ್‌ಶಾರನ್ನು ಆಯ್ಕೆ ಮಾಡಲಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಖವಾಜ ಜೊತೆಗೆ ರೆನ್‌ಶಾ ಬ್ಯಾಟಿಂಗ್ ಆರಂಭಿಸುವುದು ಖಚಿತವಾಗಿದೆ. ಮ್ಯಾಟ್ ರೆನ್‌ಶಾ ನಾಗ್ಪುರದಲ್ಲಿ ನಡೆದ ಟೆಸ್ಟ್‌ನಲ್ಲಿ ಆಡಿದ್ದರು, ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್ ಗಳಿಸಿದ್ದ ಅವರು, ಎರಡನೇ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು.
2ನೇ ಟೆಸ್ಟ್‌ನಲ್ಲಿ ಅವರನ್ನು ಕೈಬಿಟ್ಟು ಟ್ರಾವಿಸ್ ಹೆಡ್‌ಗೆ ಅವಕಾಶ ನೀಡಲಾಗಿತ್ತು. ವಾರ್ನರ್ ಗಾಯಗೊಂಡು ಹೊರಗುಳಿದ ಬಳಿಕ ರೆನ್‌ಶಾ ಮತ್ತೆ ಅವಕಾಶ ಪಡೆದುಕೊಂಡಿದ್ದಾರೆ.
ಮುಂದಿನ ಟೆಸ್ಟ್‌ಗೂ ಅನುಮಾನ
ಫಾರ್ಮ್ ಕಳೆದುಕೊಂಡಿರುವ ಡೇವಿಡ್ ವಾರ್ನರ್ ಇನ್ನು ಉಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೂಡ ಆಡುವುದು ಅನುಮಾನ ಎನ್ನಲಾಗಿದೆ. ಎರಡನೇ ಟೆಸ್ಟ್ ಪಂದ್ಯದಿಂದಲೇ ಅವರನ್ನು ಕೈಬಿಡುವ ಸಾಧ್ಯತೆ ಇತ್ತಾದರೂ, ಆಲ್‌ರೌಂಡರ್ ಕೆಮರಾನ್ ಗ್ರೀನ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗದ ಕಾರಣ ವಾರ್ನರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಮಿಚೆಲ್ ಸ್ಟಾರ್ಕ್, ಕ್ಯಾಮೆರಾನ್ ಗ್ರೀನ್ 3ನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಗೆ ಲಭ್ಯವಾಗುವ ಕಾರಣ ವಾರ್ನರ್ ಮುಂದಿನ ಪಂದ್ಯದಿಂದ ಕೂಡ ಹೊರಗುಳಿಯುವುದು ಖಚಿತವಾಗಿದೆ.
ಏನಿದು ಕನ್‌ಕ್ಯುಶನ್ ಬದಲೀ ಆಟಗಾರನ ನಿಯಮ?
2019ರಲ್ಲಿ ಐಸಿಸಿ ಕನ್‌ಕ್ಯುಶನ್ ಬದಲೀ ಆಟಗಾರ ಎನ್ನುವ ಹೊಸ ನಿಯಮವನ್ನು ಪರಿಚಯಿಸಿತು. ಕ್ರಿಕೆಟ್‌ನಲ್ಲಿ ತಲೆಗೆ ಚೆಂಡು ತಾಗಿ ಆಟಗಾರ ಹೊರಗುಳಿಯುವ ಘಟನೆಗಳು ಹೆಚ್ಚಾದ ನಂತರ ಈ ನಿಯಮವನ್ನು ತರಲಾಗಿದೆ.
ಬ್ಯಾಟರ್ ತಲೆಗೆ ಚೆಂಡು ತಾಗಿ ಪಂದ್ಯದಲ್ಲಿ ಆಡಲು ಸಾಧ್ಯವಾಗದಿದ್ದರೆ ಅಂತಹ ಆಟಗಾರನಿಗೆ ಬದಲಾಗಿ ಬೇರೆ ಆಟಗಾರನಿಗೆ ಆಡಲು ಅವಕಾಶ ಸಿಗುತ್ತದೆ. ಒಮ್ಮೆ ಬದಲೀ ಆಟಗಾರನನ್ನು ಹೆಸರಿಸಿದರೆ ನಂತರ ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಗಾಯಗೊಂಡ ಆಟಗಾರ ಮತ್ತೆ ಆಡಲು ಅವಕಾಶ ಸಿಗುವುದಿಲ್ಲ.
ಸಾಮಾನ್ಯವಾಗಿ ಆಟಗಾರ ಗಾಯಗೊಂಡರೆ ಬದಲೀ ಆಟಗಾರನಿಗೆ ಫೀಲ್ಡಿಂಗ್ ಮಾಡಲು ಅವಕಾಶ ಇರುತ್ತದೆ. ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಅನುಮತಿ ನೀಡುವುದಿಲ್ಲ. ಆದರೆ, ಕನ್‌ಕ್ಯುಶನ್ ಬದಲೀ ಆಟಗಾರ ನಿಯಮದಲ್ಲಿ ಆತ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅನುಮತಿ ಸಿಗುತ್ತದೆ.
ನಿಯಮಗಳ ಪ್ರಕಾರ ಬ್ಯಾಟರ್ ಗಾಯಗೊಂಡರೆ ಮತ್ತೊಬ್ಬ ಬ್ಯಾಟರ್ ಮಾತ್ರ ಬದಲೀ ಆಟಗಾರನಾಗಿ ಆಡಬಹುದು. ಬೌಲರ್ ಗಾಯಗೊಂಡರೆ ಬೌಲರ್ ಮಾತ್ರ ಬದಲಿಯಾಗಿ ಕಣಕ್ಕಿಳಿಯಬಹುದು. ಬೌಲರ್ ಗಾಯಗೊಂಡರೆ ಬ್ಯಾಟರ್ ಬದಲಿ ಆಟಗಾರನಾಗಿ ಆಡಲು ಅವಕಾಶ ಇರುವುದಿಲ್ಲ.