AAP ಯ ಉಚಿತ ವಿದ್ಯುತ್ ಆಶ್ವಾಸನೆಗೆ ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ

AAP ಯ ಉಚಿತ ವಿದ್ಯುತ್ ಆಶ್ವಾಸನೆಗೆ ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ

ಹಮದಾಬಾದ್: ಗುಜರಾತ್ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲಾ ಪಕ್ಷಗಳು ಕೂಡ ಗೆಲ್ಲಲು ರಣತಂತ್ರ ಹೂಡಿವೆ. ಈ‌ ಮಧ್ಯೆ ಎಎಪಿ ಪಕ್ಷ ಮತದಾರರಿಗೆ ಭಾಗ್ಯಗಳ ಮೇಲೆ ಭಾಗ್ಯ ಕೊಡಲು ಮುಂದಾಗಿದೆ.

ಅದರಂತೆ ಉಚಿತ ವಿದ್ಯುತ್ ನೀಡುವ ಭರವಸೆ ಕೊಟ್ಟಿದ್ದಾರೆ ಕೇಜ್ರಿವಾಲ್ ಅವರು.

ಹೌದು, ಎಎಪಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 300 ಯುನಿಟ್ ವಿದ್ಯುತ್ ನೀಡೋದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ ಕೊಡುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ಮೋದಿ ಎಎಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುಜರಾತ್ ಜನ ಉಚಿತ ವಿದ್ಯುತ್ ಪಡೆಯುವ ಬದಲು ವಿದ್ಯುತ್ ನಿಂದ ಆದಾಯ ಗಳಿಸುವುದು ಹೇಗೆ ಎಂಬುದನ್ನು ನೋಡಬೇಕು ಎಂದು ಹೇಳಿದ್ದಾರೆ‌.

ಗುಜರಾತ್ ನ ಅರವಲ್ಲಿಯ ಮೊದಸಾ ಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸೋಲಾರ್ ಮೂಲಕ ವಿದ್ಯುತ್ ಹೇಗೆ ತಯಾರಿಸಿ ಅದರಿಂದ ಯಾವ ರೀತಿ ಆದಾಯ ಮಾಡಿಕೊಳ್ಳಬೇಕು ಎಂಬುದು ಮುಖ್ಯ. ಇನ್ನು ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ಮೋದಿ, ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.