ವೇತನ ಪರಿಷ್ಕರಣೆಗೆ ಆಯೋಗ ರಚನೆ: ಬಸವರಾಜ ಬೊಮ್ಮಾಯಿ

ಕಾರವಾರ: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆ ಮಾಡಿದ್ದು ಆಯೋಗದ ಸಂಪರ್ಕದಲ್ಲಿದ್ದೇವೆ. ಬುಧವಾರದೊಳಗೆ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ದಾಪುರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ತಿಳಿಸಿದ್ದಾರೆ.
ಸರಕಾರಿ ನೌಕರರು ನಮ್ಮವರು, ವೇತನ ಆಯೋಗದ ಜತೆ ಸಂಪರ್ಕದಲ್ಲಿದ್ದೇವೆ. ವರದಿ ತರಿಸಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಇವತ್ತು ಸಂಜೆ ಹೊರಟು ಹಿರಿಯ ಅಧಿಕಾರಿಗಳು ಹಾಗೂ ಆಯೋಗದ ಜೊತೆಗೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸುವ ಪ್ರಯತ್ನ ಮಾಡುತ್ತೇನೆ. ಎಸ್ಮಾ ಜಾರಿ ಮಾಡುವಂಥ ಪರಿಸ್ಥಿತಿ ಬಂದಿಲ್ಲ, ಆ ಬಗ್ಗೆ ಯೋಚನೆ ಮಾಡಿಲ್ಲ. ಆಯೋಗ ರಚನೆ ಆದಮೇಲೆ ವೇತನ ಕೊಡಲೇಬೇಕಾಗುತ್ತದೆ. ನಾಳೆ ಎಲ್ಲವೂ ಬಗೆಹರಿಯುತ್ತೆ ಎನ್ನುವ ವಿಶ್ವಾಸ ಇದೆ ಎಂದರು.
ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರೋಪದ ಬಗ್ಗೆ ವಿವರ ಕೊಡಲಿ. ತನಿಖೆ ಮಾಡೋಣ. ಯಾವುದೇ ತನಿಖೆಗೂ ಸಿದ್ಧನಿದ್ದೇನೆ; ಈ ಬಗ್ಗೆ ಪ್ರಶ್ನೆಯೇ ಇಲ್ಲ. ಆಧಾರವಿಲ್ಲದೆ ಆರೋಪ ಮಾಡಬಾರದು. ಪ್ರಿಯಾಂಕ್ ಖರ್ಗೆಯವರ ಮೇಲೂ ಬಹಳಷ್ಟು ಆರೋಪವಿದೆ. ಲೋಕಾಯುಕ್ತಕ್ಕೆ ದೂರು ನೀಡಲಿ, ತನಿಖೆಯಾಗಲಿ ಎಂದಿದ್ದಾರೆ.