ಎರಡು ದಿನದಲ್ಲಿ ನೇಪಾಳದ ನೂತನ ಪ್ರಧಾನಿ ಆಯ್ಕೆಗೆ ಸುಪ್ರೀಂಕೋರ್ಟ್ ಸೂಚನೆ

ಎರಡು ದಿನದಲ್ಲಿ ನೇಪಾಳದ ನೂತನ ಪ್ರಧಾನಿ ಆಯ್ಕೆಗೆ ಸುಪ್ರೀಂಕೋರ್ಟ್ ಸೂಚನೆ

ನೇಪಾಳದಲ್ಲಿ ಮತ್ತೊಂದು ರಾಜಕೀಯ ಸ್ಥಿತ್ಯಂತರವಾಗುವ ಲಕ್ಷಣಗಳಿದ್ದು, ಸ್ಥಳೀಯ ಸಂಸತ್‌ನ್ನು ಮರುಸ್ಥಾಪಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಹಾಗೆಯೇ ಮುಂದಿನ ಎರಡು ದಿನಗಳೊಳಗೆ ಶೇರ್ ಬಹದ್ದೂರ್ ದೇವುಬಾ ಅವರನ್ನು ಪ್ರಧಾನಿಯಾಗಿ ನೇಮಿಸುವಂತೆಯೂ ಸೂಚಿಸಿದೆ.

ಕಳೆದ ಐದು ತಿಂಗಳಲ್ಲಿ ಸುಪ್ರೀಂಕೋರ್ಟ್ ಈ ರೀತಿ ಆದೇಶ ಮಾಡುತ್ತಿರುವುದು ಎರಡನೇಬಾರಿಯಾಗಿದೆ. ಇದು ಹಾಲಿ ಪ್ರಧಾನಿ ಕೆಪಿ ಶರ್ಮಾ ಓಲಿ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಸಧ್ಯಕ್ಕೆ ಅವರು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.

ಇತ್ತೀಚೆಗೆ ಬಹುಮತವನ್ನು ಕಳೆದುಕೊಂಡರೂ ಕೂಡ ಅವರು ಪ್ರಧಾನಿಯಾಗಿ ಮುಂದುವರೆದಿದ್ದರು, ಐದು ಸದಸ್ಯರ ಸಂವಿಧಾನ ಪೀಠವು ಸೋಮವಾರ ಈ ಆದೇಶ ಹೊರಡಿಸಿದ್ದು, ನೇಪಾಳ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರು ದೇವುಬಾ ಅವರನ್ನು ಎರಡು ದಿನಗಳೊಳಗೆ ಪ್ರಧಾನಿಯಾಗಿ ನೇಮಿಸಬೇಕೆಂದು ಸೂಚಿಸಿದೆ.

ಕಳೆದ ಮೇ 22 ರಂದು 275 ಸದಸ್ಯರ ಸಂಸತ್‌ನ್ನು ವಿಸರ್ಜಿಸಿ ಅಧ್ಯಕ್ಷ ವಿದ್ಯಾ ದೇವಿ ಭಂಡಾರಿ ಆದೇಶಿಸಿದ್ದರು, ಹಾಗೆಯೇ ನವೆಂಬರ್ 12 ರಂದು ರಾಷ್ಟ್ರೀಯ ಚುನಾವಣೆಗೂ ಕೂಡ ಕೆಪಿ ಶರ್ಮಾ ಓಲಿ ಆದೇಶಿಸಿದ್ದರು.

ಕಳೆದ ವಾರ ಕೇಂದ್ರ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿತ್ತು, ಆದರೆ ಈ ಆದೇಶವನ್ನು ವಿರೋಧಿಸಿ 30ಕ್ಕೂ ಅಧಿಕ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು.

ಈ ನೇಪಾಳಿ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು ಕೂಡ ಅರ್ಜಿದಾರರಲ್ಲಿ ಒಬ್ಬರಾಗಿದ್ದರು. ನೇಪಾಳದಲ್ಲಿ ಕಳೆದ ವರ್ಷ ಡಿಸೆಂಬರ್‌ನಿಂದಲೂ ರಾಜಕೀಯ ಅಸ್ಥಿರತೆ ಮುಂದುವರೆದಿದೆ. ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಾರ್ಟಿಯಲ್ಲಿನ ಸಮಸ್ಯೆಯು ಇದಕ್ಕೆ ಕಾರಣವಾಗಿದೆ.

ಈ ಹಿಂದೆಯೂ ಕೂಡ ನೇಪಾಳದ ಸಂಸತ್‌ ವಿರ್ಜಿಸಲಾಗಿತ್ತು ಆಗಲೂ ಫೆಬ್ರವರಿ 23ರಂದು ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿ ಸಂಸತ್ ವಿಸರ್ಜನೆಗೆ ತಡೆಯೊಡ್ಡಿತ್ತು.