ಸಾಮರ್ಥ್ಯ ವೃದ್ಧಿಸಿಕೊಂಡ ಅಗ್ನಿಶಾಮಕ ಸೇವೆ
ಬೆಂಗಳೂರು: ಅಗ್ನಿ ದುರಂತಗಳನ್ನು ಸಮರ್ಥವಾಗಿ ಎದುರಿಸಲು, ಜನರ ಪ್ರಾಣ ರಕ್ಷಣೆ ಮಾಡಲು ಅಗ್ನಿಶಾಮಕ ಸೇವೆಯ ಪಡೆ ಇನ್ನಷ್ಟು ಆಧುನೀಕರಣಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಗುರುವಾರ ಆಯೋಜಿಸಿದ್ದ 90 ಮೀಟರ್ ಏಣಿ ಒಳಗೊಂಡ ಪ್ಲಾಟ್ಫಾರಂ ವಾಹನ ಹಸ್ತಾಂತರಿಸಿ, ಹಸಿರು ದೀಪಾವಳಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಮುಂಬೈ ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಮಾತ್ರ ಇಷ್ಟು ದೊಡ್ಡ ಏಣಿ ಇರುವ ವಾಹನಗಳನ್ನು ಪರಿಚಯಿಸಲಾಗಿದೆ. ಜನರ ರಕ್ಷಣೆ ಹಾಗೂ ಇನ್ನಷ್ಟು ಎತ್ತರದ ಕಟ್ಟಡಗಳ ನಿರ್ಮಾಣ ಕಾರ್ಯ ಸಾಧ್ಯವಾಗಲಿದೆ. ಅಗ್ನಿ ದುರಂತಗಳನ್ನು ನಿಯಂತ್ರಿಸಲು ಉಪಯುಕ್ತವಾಗಿದೆ ಎಂದು ಹೇಳಿದರು.
ಎಸ್ಡಿಆರ್ಎಫ್ ಬಲವರ್ಧನೆ: ಪ್ರವಾಹ ಪರಿಸ್ಥಿತಿ, ಪ್ರಕೃತಿ ವಿಕೋಪ ನಿಭಾಯಿಸಲು ಎಸ್ಡಿಆರ್ಎಫ್ ಬಲಗೊಳಿಸಲಾಗುತ್ತಿದೆ. ತಂಡದಲ್ಲಿ ನೂರಕ್ಕಿಂತ ಹೆಚ್ವು ಯೋಧರು ಇದ್ದಾರೆ. ನೂತನ ಸಲಕರಣೆಗಳಿಗೆ ಈಗಾಗಲೇ ₹ 40 ಕೋಟಿ ನೀಡಲಾಗಿದೆ. ರಕ್ಷಣಾ ಕಾರ್ಯಕ್ಕಾಗಿ ಮತ್ತೆ ಎರಡು ಕಂಪನಿಗಳನ್ನು ರಚಿಸಲಾಗಿದೆ. ಅಲ್ಲೂ ನಿವೃತ್ತ ಯೋಧರಿಗೆ ಸ್ಥಾನ ನೀಡಲಾಗಿದೆ ಎಂದು ವಿವರ ನೀಡಿದರು.
ಪರಿಸರಸ್ನೇಹಿ ದೀಪಾವಳಿ: ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಕೋರಲಾಗಿದೆ. ಶಬ್ದ ಹಾಗೂ ವಾಯುಮಾಲಿನ್ಯ ತಡೆಯಬೇಕಿದೆ. 125 ಡೆಸಿಬಲ್ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಬೇಕು ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್, ಸಂಸದ ಪಿ.ಸಿ.ಮೋಹನ್, ಶಾಸಕ ನಿರಂಜನ್ ಕುಮಾರ್, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಗ್ನಿಶಾಮಕ ಸೇವೆಗಳ ಡಿಜಿಪಿ ಅಮರ್ಕುಮಾಮಾರ್ ಪಾಂಡೆ ಉಪಸ್ಥಿತರಿದ್ದರು.