ರಾಜ್ಯ ಸರ್ಕಾರಿ ನೌಕರರಿಂದ 'ಒಪಿಎಸ್‌ ಸಂಕಲ್ಪ ಯಾತ್ರೆ'

ರಾಜ್ಯ ಸರ್ಕಾರಿ ನೌಕರರಿಂದ 'ಒಪಿಎಸ್‌ ಸಂಕಲ್ಪ ಯಾತ್ರೆ'

ಬೆಳಗಾವಿ: 'ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್‌) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕು' ಎಂದು ಒತ್ತಾಯಿಸಿ ಸರ್ಕಾರಿ ನೌಕರರು ರಾಜ್ಯದಾದ್ಯಂತ ನಡೆಸುತ್ತಿರುವ 'ಒಪಿಎಸ್‌ ಸಂಕಲ್ಪ ಯಾತ್ರೆ' ನಗರದಲ್ಲಿ ಭಾನುವಾರ ಸಂಚರಿಸಿತು.

ಇಲ್ಲಿನ ಕೋಟೆ ಕೆರೆ ಬಳಿಯ ಅಶೋಕ ವೃತ್ತದಿಂದ ಆರಂಭವಾದ ಯಾತ್ರೆ ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮನ ವೃತ್ತ ಮಾರ್ಗವಾಗಿ ಸಂಚರಿಸಿ, ನ್ಯಾಯಾಲಯ ಆವರಣ ತಲುಪಿತು. ಅಲ್ಲಿ ನೌಕರರು ಸಭೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು.

ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ, 'ರಾಜ್ಯದಲ್ಲಿ 2006ರ ಏ.1ರ ನಂತರ ಸರ್ಕಾರಿ ಕೆಲಸಕ್ಕೆ ಸೇರಿದವರಿಗೆ ಎನ್‌ಪಿಎಸ್‌ ಜಾರಿಗೊಳಿಸಲಾಗಿದೆ. ಇದರ ಅನ್ವಯ, ಸೇವಾನಿವೃತ್ತಿ ಹೊಂದಿದವರಿಗೆ ಅಲ್ಪಪ್ರಮಾಣದ ಪಿಂಚಣಿ ಸಿಗಲಿದೆ. ಪಿಂಚಣಿ ವಿಚಾರವಾಗಿ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದನ್ನು ವಿರೋಧಿಸಿ 27ನೇ ಜಿಲ್ಲೆಯಾಗಿ ಬೆಳಗಾವಿಯಲ್ಲಿ ಯಾತ್ರೆ ನಡೆಸುತ್ತಿದ್ದೇವೆ. ಆದರೆ, ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ' ಎಂದು ದೂರಿದರು.

'ಎನ್‌ಪಿಎಸ್‌ ಕೇಂದ್ರ ಸರ್ಕಾರದ್ದು. ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹಾರಿಕೆ ಉತ್ತರ ನೀಡುತ್ತಿತ್ತು. ಆದರೆ, 2022ರ ಬಜೆಟ್‌ನಲ್ಲಿ ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್‌ ರಾಜ್ಯ ಸರ್ಕಾರಗಳು ಎನ್‌ಪಿಎಸ್‌ ರದ್ದುಗೊಳಿಸಿ ಆದೇಶ ಹೊರಡಿಸಿವೆ. ಕರ್ನಾಟಕ ಸರ್ಕಾರವೂ ಇದೇ ಮಾದರಿಯಲ್ಲಿ ಹೆಜ್ಜೆ ಇರಿಸಬೇಕು' ಎಂದು ಒತ್ತಾಯಿಸಿದರು.

'ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಡಿ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 'ಮಾಡು ಇಲ್ಲವೇ ಮಡಿ ಅನಿರ್ದಿಷ್ಟ ಹೋರಾಟ' ಕೈಗೊಳ್ಳಲಾಗುವುದು. ಸರ್ಕಾರ ನಮ್ಮ ಹೋರಾಟ ಹಗುರವಾಗಿ ಪರಿಗಣಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಕೆ ಕೊಟ್ಟರು.

ಸಂಘದ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ, ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ, ಉಪಾಧ್ಯಕ್ಷ ಚಂದ್ರಕಾಂತ ತಳವಾರ, ಸಂಘಟನಾ ಕಾರ್ಯದರ್ಶಿಗಳಾದ ಎಲ್‌.ದಯಾನಂದ, ಮಹೇಶ ಹೊಸೂರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ್‌ ಹೆಬ್ಳಿ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಸಿದ್ಧರಾಮ ಲೋಕನ್ನವರ, ಎಸ್‌.ಎಂ.ಪಾಟೀಲ, ವಿ.ಆರ್‌. ಹೈಬತ್ತಿ ಇತರರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸರ್ಕಾರಿ ನೌಕರರು ಭಾಗವಹಿಸಿದ್ದರು